ದೂರವಾಣಿ ಸಂಖ್ಯೆ: 0824- 2416511
ಇಮೇಲ್:fishmarkfedn@gmail.com

ಅಧ್ಯಕ್ಷರ ಸಂದೇಶ


ಯಶಪಾಲ. ಎ. ಸುವರ್ಣ

ಕರಾವಳಿಯು ಮತ್ಸ್ಯ ಸಂಪನ್ಮೂಲದ ರೂಪದಲ್ಲಿ ಅಗಾಧ ಸಾಗರ ಸಂಪತ್ತನ್ನು ಹೊಂದಿರುತ್ತದೆ. ಕರ್ನಾಟಕದ ವಿಶಾಲ ಕರಾವಳಿಯು ವಿಪುಲ ಮೀನುಗಾರಿಕೆಗೆ ಅವಕಾಶವನ್ನು ನೀಡಿದೆ. ರಾಜ್ಯದಲ್ಲಿ ಜೀವನೋಪಾಯಕ್ಕಾಗಿ ಮೀನುಗಾರಿಕೆಯನ್ನು ಅವಲಂಬಿಸಿರುವ ಮೀನುಗಾರರು ಬಹುಸಂಖ್ಯೆಯಲ್ಲಿದ್ದಾರೆ. ಇವರು ಸಾಂಪ್ರದಾಯಿಕ ಮೀನುಗಾರ ಸಮುದಾಯದವರಾಗಿದ್ದು, ಹೆಚ್ಚಿನವರು ಆಧುನಿಕ ಸವಾಲನ್ನು ಎದುರಿಸಲು ಶಿಕ್ಷಣ ಮತ್ತು ಆರ್ಥಿಕ ಬೆಂಬಲವನ್ನು ಹೊಂದಿರುವುದಿಲ್ಲ. ಇಂತಹ ಜನರ ಏಳಿಗೆಗಾಗಿ ಆರ್ಥಿಕ, ತಾಂತ್ರಿಕ ಮತ್ತು ಸಾಮೂಹಿಕ ಸಹಕಾರ ನೀಡಲು 1954 ರಲ್ಲಿ ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‍ನನ್ನು ಸ್ಥಾಪಿಸಲಾಯಿತು.

ಸ್ವಾತಂತ್ರ್ಯೊತ್ತರ ಅವಧಿಯಲ್ಲಿ ಭಾರತವು ಪ್ರಗತಿ ಪಥದತ್ತ ಮುನ್ನಡೆಯುತ್ತಿದ್ದು ನಮ್ಮ ಸಂಸ್ಥೆಯು ಸಾಂಪ್ರದಾಯಿಕ ಮೀನುಗಾರರನ್ನು ಪ್ರಸ್ತುತ ಬೆಳವಣಿಗೆಗನುಗುಣವಾಗಿ ಆಧುನಿಕ ಮೀನುಗಾರಿಕೆ ಪದ್ಧತಿಯಲ್ಲಿ ತೊಡಗಿಸಲು ಆ ಮೂಲಕ ಉತ್ತಮ ಹಿಡಿತವನ್ನು ಗಳಿಸಲು ಬೆಂಬಲಿಸುತ್ತಿದೆ. ಈ ನಿಟ್ಟಿನಲ್ಲಿ ಅವರ ಆರ್ಥಿಕ ಅಭಿವೃದ್ಧಿಗೆ ಸಂಸ್ಥೆಯು ಇತ್ತೀಚೆಗೆ ಆರಂಭಿಸಿದ ಬ್ಯಾಂಕಿಂಗ್ ವಿಭಾಗವು ವರವಾಗಿ ಪರಿಣಮಿಸಿದೆ.

ಇಂತಹ ಮಹತ್ತರ ಸಂಸ್ಥೆಯ ಅಧ್ಯಕ್ಷನಾಗಿ ಸೇವೆ ಸಲ್ಲಿಸುವುದು ನನ್ನ ಸುಯೋಗ ಮತ್ತು ಸಂಸ್ಥೆ ಹಾಗೂ ಫಲಾನುಭವಿಗಳಲ್ಲಿ ಧನಾತ್ಮಕ ಬದಲಾವಣೆ ತರುವುದು ನನ್ನ ಕನಸು. ಸಂಸ್ಥೆಯನ್ನು ಪ್ರಗತಿ ಪರ ಭವಿಷ್ಯದತ್ತ ಆಧುನಿಕ ರೂಪದೊಂದಿಗೆ ಮುನ್ನಡೆಸಲು ಶ್ರಮಿಸಿದ್ದೇನೆ. ವೈಜ್ಞಾನಿಕ ತಳಹದಿ, ತಾಂತ್ರಿಕತೆಯ ಸ್ಪರ್ಶ, ಮಾನವೀಯ ಮೌಲ್ಯಗಳೊಂದಿಗೆ ಸಂಪನ್ಮೂಲಗಳ ಸಂರಕ್ಷಣೆ ನನ್ನ ದೃಷ್ಟಿಯಲ್ಲಿ ಇರುವ ಅಂಶಗಳು. ಮುಂಬರುವ ವರ್ಷಗಳಲ್ಲಿ ಫೆಡರೇಶನ್‍ನನ್ನು ಒಂದು ದೊಡ್ಡ ಶಕ್ತಿಯನ್ನಾಗಿ ರೂಪಿಸಲು ಎಲ್ಲರ ಸಹಕಾರವನ್ನು ಕೋರುತ್ತೇನೆ.

ಯಶಪಾಲ. ಎ. ಸುವರ್ಣ

ಅಧ್ಯಕ್ಷರು